ನಯವಿನಯ -
ಕಾವ್ಯ ನಾಟಕಾದಿಗಳಲ್ಲಿ ಪಾತ್ರ, ಸನ್ನಿವೇಶ ರಚನೆ ಅಲಂಕಾರ, ಶೈಲಿ ಇವುಗಳ ಔಚಿತ್ಯವನ್ನು ಚರ್ಚಿಸುವಾಗ ನಯವಿನಯದ (ಡೆಕೊರಮ್) ಮಾತು ಬರುತ್ತದೆ. ಪ್ರಾಚೀನ ಗ್ರೀಕರ ವಿಮರ್ಶಕ ಮೌಳಿ ಅರಿಸ್ಟಾಟಲ್ ತನ್ನ `ಕಾವ್ಯವಿಚಾರವೆಂಬ ಗ್ರಂಥದಲ್ಲಿ ನಾಟಕದ ಪಾತ್ರ ಎಲ್ಲ ದೃಷ್ಟಿಯಿಂದಲೂ ತಕ್ಕುದಾಗಿರಬೇಕೆಂದು ವಿಧಿಸುವಾಗ ಹಾರ್ಮೊಟ್ಟನ್ ಎಂಬ ಪದವನ್ನು ಉಪಯೋಗಿಸಿದ; ಮುಂದಣ ಒಂದು ಅಧ್ಯಾಯದಲ್ಲಿ ನಾಟಕಕಾರ ಪ್ರತಿಯೊಂದು ದೃಶ್ಯವನ್ನೂ ಪೂರ್ವಭಾವಿಯಾಗಿ ಮನಸ್ಸಿನ ಮುಂದೆ ತಂದುಕೊಂಡು ರಚಿಸಿದರೆ ಅಸಂಬದ್ಧವಾವುದೂ ಇಲ್ಲದೆ ಕಥಾಸಂವಿಧಾನ ಯುಕ್ತತೆಯಿಂದ ಕೂಡಿರುತ್ತದೆ ಎನ್ನುವಾಗ ಪ್ರಿಫೋನ್ ಎಂಬ ಪದವನ್ನು ಉಪಯೋಗಿಸಿದ. ಅದೇ ಪದವನ್ನು ತನ್ನ `ಭಾಷಣ ವಿದ್ಯೆ ಎಂಬ ಗ್ರಂಥದಲ್ಲಿ ಶೈಲಿಯ ನೇರ್ಪಿನ ವಿಚಾರವಾಗಿ ಹೇಳಿದ. ಎಂದರೆ, ಅವನಿಗೆ ಹಾರ್ಮೊಟ್ಟನ್ ಪ್ರಿಫೋನ್ ಎರಡಕ್ಕೂ ಒಂದೇ ಅರ್ಥ: ತಕ್ಕುಮೆ, ಯುಕ್ತತೆ, ನೇರ್ಪು; ಅರ್ಥಾತ್, ಕಾವ್ಯನಿರ್ಮಾಣದ ಮೂಲತತ್ತ್ವಗಳಲ್ಲಿ ಒಂದಾದ ಔಚಿತ್ಯ (ಪ್ರೊಪ್ರಯಟಿ). ಔಚಿತ್ಯವನ್ನು ಕುರಿತು ಯಾರೂ ಸಂದೇಹಪಡುವಂತಿಲ್ಲ. ಪ್ರಶ್ನೆ ಕೇಳುವಂತಿಲ್ಲ. ಅದು ಅತ್ಯಗತ್ಯವಾದದ್ದು, ಕಡ್ಡಾಯವಾದದ್ದು; ವಿಷಯ ಘಟನಾವಳಿ ಪಾತ್ರವರ್ಗ ಅಲಂಕಾರ ರೀತಿ ಭಾಷೆಯೆಲ್ಲಕ್ಕೂ ಅನ್ವಯಿಸುವಂಥಾದ್ದು. 

ಆಮೇಲೆ ಸಾಹಿತ್ಯವಿಮರ್ಶೆ ಪ್ರಾಚೀನ ರೋಮನರ ಕೈಯಿಗೆ ಬಂತು. ಅವರಲ್ಲಿ ಬಳಕೆಗೆ ಬಂದ ಶಬ್ದ ಡೆಕೊರಮ್, ನಯವಿನಯ. ಸಿಸಿರೋನ ಅಭಿಮತದಂತೆ ಲ್ಯಾಟಿನ್ ಡೆಕೊರಮ್ ಗ್ರೀಕ್ ಪ್ರಿಪೊನ್ ಎರಡಕ್ಕೂ ಸಮಾನಾರ್ಥ. ಡೆಕೊರಮ್ ಪದವನ್ನು ಹಾರೆಸ್ ಎಲ್ಲಿಯೂ ಉಪಯೋಗಿಸದಿದ್ದರೂ ತನ್ನ `ಕಾವ್ಯಕಲೆಯ ಉದ್ದಕ್ಕೂ ಔಚಿತ್ಯ ಸೂತ್ರವನ್ನೇ ಪ್ರತಿಪಾದಿಸಿದ್ದಾನೆ. ಪ್ರತಿಯೊಂದು ಶೈಲಿಯೂ ತನ್ನ ಸ್ಥಾನಮಾನಕ್ಕೆ ಯುಕ್ತವಾಗಿರತಕ್ಕದ್ದು; ಮಾತನ್ನಾಡುವವನ ಪದವಿ ಪ್ರತಿಷ್ಠೆ ಯಾವುದೋ ಅದಕ್ಕೆ ನೇರ್ಪಾಗಿರಬೇಕು. ಅವನ ಬಾಯಿಂದ ಬರುವ ಮಾತು. ದೇವತೆ ವೀರಗುಲಾಮ ಎಲ್ಲರೂ ಒಂದೇ ರೀತಿ ಮಾತನ್ನಾಡುತ್ತಾರೆಯೇ, ಆಡಬಹುದೆ? ಯುವಕ, ವೃದ್ಧ, ದಾದಿ, ದೊರೆಸಾನಿ, ರೈತ, ವರ್ತಕ, ದೇಶದವ ವಿದೇಶದವ-ಇಂಥ ವ್ಯತ್ಯಾಸಗಳು ರೂಢಮೂಲವಾಗಿರುವಾಗ ಅವರವರಿಗೆ ತಕ್ಕಂತೆ ಅವರವರ ಮಾತುಕತೆ ಇರುವುದು ನ್ಯಾಯ, ತರ್ಕಸಮ್ಮತ, ಸರಿ. ಅದೂ ಅಲ್ಲದೆ ಗಂಭೀರ ನಾಟಕದ ವಸ್ತು ವಿವರ ಬೇರೆ, ವಿನೋದನಾಟಕದ ವಸ್ತು ವಿವರ ಬೇರೆ. ಎರಡನ್ನೂ ಎಂದೂ ಮಿಶ್ರಮಾಡಕೂಡದು. 

	ಹೊಸ ಹುಟ್ಟಿನ ಅವಧಿಯಲ್ಲಿ ಪ್ರಾಚೀನರ ಈ ತತ್ತ್ವ ಸೂತ್ರಪ್ರಾಯವಾಯಿತು. ಕಾವ್ಯಕ್ಕೆ ಅಂದವನ್ನೂ ಸಾರ್ಥಕ್ಯವನ್ನೂ ಒದಗಿಸುವ ಅಂಶಗಳಲ್ಲಿ ಯುಕ್ತತೆ ಮುಖ್ಯವಾದದ್ದೆಂಬ ವಿದ್ವಾಂಸರ ಅಬಿಪ್ರಾಯವನ್ನು ವಿರೋಧಿಸಿದವರು ಕಡಿಮೆ, ಅಪರೂಪ. ಕೆಲವರಿಗಂತೂ ಅದು ಮೇರುತತ್ತ್ವವಾಗಿ ತೋರಿಬಂತು.

	ಇನ್ನೊಂದು ಪದವೂ ಜಿಜ್ಞಾಸೆಯ ಒಳಹೊಕ್ಕು ಗೊಂದಲಕ್ಕೆ ಕಾರಣವಾಯಿತು. ಅದಾವುದೆಂದರೆ, ಡೀಸೆನ್ಸಿ-ಸಭ್ಯತೆ, ವಿನೀತಮರ್ಯಾದೆ. ಔಚಿತ್ಯ ನಯವಿನಯ ಸಭ್ಯತೆ ಮೂರೂ ಒಂದೇ ಎಂಬ ಅವಿವೇಚಿತ ಭಾವನೆ ಪ್ರಬಲಗೊಂಡಿತು. ಡೀಸೆನ್ಸಿ, ಪ್ರೊಪ್ರಯಟಿ ಪದಗಳಿಗಿಂತ ಅಧಿಕವಾಗಿ ಡೆಕೊರಮ್ ಪದ ಪ್ರಯೋಗಕ್ಕೆ ಬಂದು, ಅದೇ 17-18ನೆಯ ಶತಮಾನಗಳಲ್ಲಿ ಅತ್ಯುಚ್ಚಸ್ಥಾನವನ್ನು ಗಳಿಸಿಕೊಂಡು, ಕಠಿಣ ಶಾಸನದಂತೆ ಬಲಿಷ್ಠ ನಿಬಂಧನೆಯಾಯಿತು. ಸಡಿಲಗೊಡದ ಕಬ್ಬಿಣ ಕಟ್ಟಾಗಿ ಸ್ವಾತಂತ್ರ್ಯಪ್ರಿಯರಿಗೆ ತ್ರಾಸ ಕೊಟ್ಟಿತು. ಸಾಮಾಜಿಕ ಜೀವನದಲ್ಲಿ ನಯವಿನಯ ಗೌರವಾರ್ಹತೆಯಾಗಿ (ರೆಸ್ಪೆಕ್ಟಬಿಲಿಟಿ) ಪರಿಣಮಿಸಿತು. ಅದು ಪ್ರಕೃತ ವಿಷಯವಲ್ಲ. ಸಾಹಿತ್ಯ ಮತ್ತು ಲಲಿತಕಲೆಯ ವಿಮರ್ಶೆಯಲ್ಲಿ ನಯವಿನಯ ಯಾವುದೆಂಬುದು ನಮ್ಮ ಪರಿಶೀಲನೆ. 

	17-18ನೆಯ ಶತಮಾನಗಳಲ್ಲಿ ನವಶಿಷ್ಟತೆ (ನಿಯೊಕ್ಲಾಸಿಸಿಸಮ್) ಎಂಬ ಸಂಪ್ರದಾಯ ಬೆಳೆಯಿತು. ನಯವಿನಯ ತತ್ತ್ವವೇ ಅದರ ಬೇರು ಎಂದು ಹೇಳಿದರೆ ತಪ್ಪಾಗುವುದಿಲ್ಲ. ಆ ಸಂಪ್ರದಾಯದ ಅನುಯಾಯಿಗಳಿವೆ. ರೊಮ್ಯಾಂಟಿಕ್ ನಾಟಕ ರೂಪಕಾಭಾಸದಂತೆ ಕಂಡುಬಂತು. ವಾಲ್ಟೇರ್ ಮೊದಲಾದವರು ಷೇಕ್ಸ್‍ಪಿಯರನ್ನು ಹೀನಾಮಾನಾ ದೂಷಿಸಿದರು. ಜಾನ್ಸನ್ ಕೂಡ ಅವನು ಕಂಬಳಿ ಮತ್ತು ಚೂರಿ ಎಂಬ ಗ್ರಾಮ್ಯ ಶಬ್ದಗಳನ್ನು ಹತ್ತಿರಹತ್ತಿರದ ವಾಕ್ಯಗಳಲ್ಲಿ ಉಪಯೋಗಿಸಿ ಟ್ರ್ಯಾಜಡಿಯ ಘನಗಾಂಭೀರ್ಯವನ್ನು ಇಳಿಸಿದನೆಂದು ಆಕ್ಷೇಪಿಸಿದ. ಘೋರಕೃತ್ಯವಾವುದೂ ರಂಗದ ಮೇಲೆ ಜರುಗಬಾರದೆಂದು ನಯವಿನಯದ ಇನ್ನೊಂದು ಆಜ್ಞೆ; ಏತಕ್ಕೆಂದರೆ ಅದರಿಂದ ಸುಸಭ್ಯ ಪ್ರೇಕ್ಷಕರಿಗೆ ತಳಮಳ ಉಂಟಾಗಬಹುದು. ನಯವಿನಯವೆಂಬುದು ಹೆಚ್ಚುಹೆಚ್ಚಾಗಿ ಆಂತರ್ಯದ ವಿಚಾರಗಳನ್ನು ಅಲಕ್ಷಿಸಿ ಬಾಹ್ಯವಿಚಾರಗಳಿಗೆ ಸಂಬಂಧಿಸತೊಡಗಿತು; ಶಾಶ್ವತ ಮೂಲತತ್ತ್ವಗಳನ್ನು ಹಿಂಬದಿಗೊತ್ತಿ, ಸಾಮಯಿಕವೂ ಅಸ್ಥಿರವೂ ಆದ ತತ್ತ್ವಗಳಿಗೆ ಪ್ರಾಧಾನ್ಯ ಕೊಟ್ಟಿತು. ಕಥನಕಾವ್ಯ ಭಾವಗೀತೆ ರೂಪಕವೆಂಬ ಸಾಹಿತ್ಯಪ್ರಭೇದಗಳ ವಿಂಗಡನೆ ಸಮ; ಆದರೆ ಅವುಗಳ ಬಿಡಿ ವಿವರಗಳಲ್ಲೂ ಇದು ಉಚಿತ, ಅದು ಅನುಚಿತ ಎಂಬ ಗೇಣುದ್ದದ ನಿಯಮಗಳನ್ನೂ ಸಾಧುತ್ವ ಅಸಾಧುತ್ವ ಯುಕ್ತ ತೀರ್ಪುಗಳನ್ನೂ ಒಕ್ಕಣಿಸಿದರೆ ಸ್ವಲ್ಪಕಾಲದ ತರುವಾಯ ಕವಿಗಳು ದಂಗೆಯೇಳದೇ ನಿಂತಾರೆ!

	ನಯವಿನಯದ ಶಾಸನ ಹೀಗೆ ಒಂದು ಕಡೆ ರೂಪುಗೊಳ್ಳುತ್ತಿದ್ದಾಗ ಇನ್ನೊಂದು ಕಡೆ ಸ್ವಾತಂತ್ರ್ಯಕ್ಕೂ ಕೊನೆಗೆ ಸ್ವಾಚ್ಛಂದ್ಯಕ್ಕೂ ಪ್ರೋತ್ಸಾಹ ದೊರಕುತ್ತಲೇ ಇತ್ತು. ಮಧ್ಯಯುಗದ ಎಷ್ಟೋ ಲೇಖಕರಿಗೆ ಪುರಾತನ ಗ್ರೀಕ್ ಮತ್ತು ರೋಮನರ ಸಾಹಿತ್ಯವೂ ಸಾಹಿತ್ಯಮೀಮಾಂಸೆಯೂ ಚೆನ್ನಾಗಿ ಗೊತ್ತಿರಲಿಲ್ಲ; ಬೈಬಲ್ ಗ್ರಂಥವೂ ಕ್ರೈಸ್ತ ಸಂತರ ಬರೆವಣಿಗೆಗಳೂ ಅವರ ಅಧ್ಯಯನದ ಮೀಸಲು ಹೊತ್ತಗೆಗಳಾಗಿದ್ದವು. ಆದ್ದರಿಂದ, ಅವುಗಳ ಪ್ರೇರಣೆಗೆ ವಶವಾಗಿ, ಆಂತರ್ಯ ಬೋಧೆಯಿಂದ ಕಟ್ಟಿದ ಕಾವ್ಯಕ್ಕೆ ಹೊರನಿಯಮದ ಹಂಗೇಕೆ ಎಂಬ ಭಾವನೆ ಉದಯವಾದದ್ದು ಆಶ್ಚರ್ಯವಲ್ಲ. ಸ್ವಾಭಾವಿಕತೆ (ನ್ಯಾಚುರಲ್‍ನೆಸ್) ಕವಿಯನ್ನು ನಡೆಸಿಕೊಂಡರೆ ಅವನ ಕಾವ್ಯ ಒಪ್ಪು ಎಂಬುದು ಕಡತಕ್ಕೆ ಸೇರಿದ ಸಿದ್ಧಾಂತವಾಯಿತು. ಹೊಸಹುಟ್ಟಿನ ಹಲವು ಕವಿವರ್ಯರೂ ಅದಕ್ಕೆ ಸಮರ್ಥನೆ ತಂದು ಕೊಟ್ಟರು. 16ನೆಯ ಶತಮಾನದ ನಟನೂ ನಾಟಕಕಾರನೂ ಆದ ರುಸಾಂಟೆ ಶಿಷ್ಟಸಂಪ್ರದಾಯದ ಔಚಿತ್ಯದ ಜೊತೆಗೆ ಸರಳ ಸ್ವಾಭಾವಿಕತೆಯನ್ನೂ ಇನ್ನೊಂದು ಔಚಿತ್ಯವನ್ನಾಗಿ ಪರಿಗಣಿಸಬೇಕೆಂದು ವಾದ ಹೂಡಿದ. ಆದರೂ ಫ್ರಾನ್ಸಿನ ಮುಂದಾಳತ್ವದಲ್ಲಿ ನಯವಿನಯ ಯೂರೋಪಿನಲ್ಲೆಲ್ಲ ತನ್ನ ದವಲತ್ತನ್ನು ಸುಮಾರು 150 ವರ್ಷ ಚಲಾಯಿಸಿತು. 18ನೆಯ ಶತಮಾನದ ಕೊನೆಯಲ್ಲಿ ರೊಮ್ಯಾಂಟಿಕ್ ಪಂಥ ಎದ್ದು ಬಂದು ಅದರ ಸರ್ವಾಧಿಕಾರವನ್ನು ಕುಗ್ಗಿಸಿತು; ಅಥವಾ ಅದಕ್ಕೆ ಉದಾರವಾದ ಅರ್ಥವನ್ನು ಅಂಟಿಸಿತು. 

	ವಾದವಿವಾದದ ಆರ್ಭಟವೆಲ್ಲವೂ ಈಗ ಮರೆಯಾಗಿದೆ. ಔಚಿತ್ಯ ಕಾವ್ಯದ ಜೀವ, ನಯವಿನಯ ಅದರ ಹೊರಮೈ ಎಂಬ ಒಪ್ಪಂದ ಸರ್ವಸಮ್ಮತವಾಗಿದೆ.								(ಎಸ್.ವಿ.ಆರ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ